ಪ್ರಾಕ್ಕಾಂತತ್ವ - 
	ಶಿಲಾರೂಪಣೆಯ ವೇಳೆ ಆ ಶಿಲೆಯಲ್ಲಿ ನೆಲೆಗೊಂಡ ಕಾಂತತ್ವ (ಪೇಲಿಯೊಮ್ಯಾಗ್ನೆಟಿಸಮ್). ದತ್ತಶಿಲೆಯಲ್ಲಿರುವ ಶೇಷಕಾಂತತ್ವದ ಪ್ರಧಾನಾಂಶವನ್ನು ಅಳೆದಾಗ ಅದು ಆ ಶಿಲೆ ರೂಪುಗೊಂಡ ಕಾಲದಲ್ಲಿ ಅಥವಾ ಅದಕ್ಕಿಂತ ಸ್ವಲ್ಪ ಕಾಲಾನಂತರದಲ್ಲಿ ಇದ್ದ ಭೂಕಾಂತಕ್ಷೇತ್ರದ ಸ್ಥಾನವನ್ನು ನಿರ್ದೇಶಿಸುತ್ತದೆ ಎಂಬುದೇ ಈ ಅಧ್ಯಯನದಲ್ಲಿ ಅಡಕವಾಗಿರುವ ತತ್ತ್ವ. ಶೇಷಕಾಂತತ್ವ (ರೆಮ್ನೆಂಟ್ ಮ್ಯಾಗ್ನೆಟಿಸಮ್) ಅಗ್ನಿಶಿಲೆ ಮತ್ತು ಮರಳುಗಲ್ಲಿನಂಥ (ಅಥವಾ ಪುಡಿಗಲ್ಲು) ಜಲಜಶಿಲೆಗಳಲ್ಲಿ ಉದ್ಭವಿಸಬಹುದು. ಜಲಜಶಿಲೆಗಳ ಪೈಕಿ ಮ್ಯಾಗ್ನೆಟೈಟ್ ಖನಿಜವಿರುವ ಮರಳು ಶಿಲೆಗಳು ಅತಿಸಮರ್ಪಕವೆನಿಸಿವೆ. ಧ್ರುವ ಪರ್ಯಟನೆ ಮತ್ತು ಖಂಡಗಳ ಅಲೆತದ ಬಗ್ಗೆ ಪ್ರಾಕ್ಕಾಂತತ್ವ ಅತಿ ಮುಖ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ಅಲ್ಲದೆ ಭೂ ಇತಿಹಾಸದ ಒಂದು ನಿರ್ದಿಷ್ಟ ಅವಧಿಯಲ್ಲಿ ಖಂಡ ಮತ್ತು ಉಪಖಂಡಗಳ ಸಾಪೇಕ್ಷ ಸ್ಥಾನಗಳನ್ನು ಅರಿಯುವಲ್ಲಿ ಉಪಯುಕ್ತವೆನಿಸಿದೆ. ಇಡೀ ಭೂತೊಗಟೆ ಚೆನ್ನಾಗಿ ರೂಪುಗೊಂಡಿದ್ದಾಗ ಭೂಕಾಂತ ಧ್ರುವಗಳು ಸಾವಕಾಶವಾಗಿ ಚಲಿಸಿದುವು. ಭೂ ಇತಿಹಾಸದಲ್ಲಿ ಇವು ಧ್ರುವೀಯತೆಯನ್ನು (ಪೊಲ್ಯಾರಿಟಿ) ಪದೇ ಪದೇ ಬದಲಾಯಿಸಿದುವು. ಸಾಮಾನ್ಯವಾಗಿ ಸ್ಥಿರವೂ ಸ್ಪಷ್ಟವೂ ಆದ ಪ್ರಾದೇಶಿಕ ದಾಖಲೆಯೊಂದರ ಕೊರತೆಯ ಕಾರಣವಾಗಿ ಅನೇಕ ವಿಧದ ಶಿಲಾಮಾದರಿಗಳಿಂದ ಸಂಗ್ರಹಿಸಲಾದ ಮಾಹಿತಿಗಳನ್ನು ವಿವರಿಸುವುದು ಸುಲಭಸಾಧ್ಯವೇನೂ ಅಲ್ಲ.

	ಶಿಲಾಕಾಂತತ್ವ : ಪ್ರಥಮವಾಗಿ ಶಿಲೆಗಳಲ್ಲಿ ಕಾಂತತ್ವವನ್ನು ಶೋಧಿಸಲಾಯಿತು. ಮಧ್ಯಪ್ರಾಚ್ಯದ ಮತ್ತು ಚೀನದ ಆದಿವಾಸಿಗಳು ಸೂಜಿಗಲ್ಲಿನ (ಅಥವಾ ಅಯಸ್ಕಾಂತದ) ಬಗೆಗೆ ತಿಳಿದವರಾಗಿದ್ದರು. ಸೂಜಿಗಲ್ಲು ಕಬ್ಬಿಣಾಂಶವುಳ್ಳ ಒಂದು ಬಗೆಯ ಶಿಲೆಯಾಗಿದ್ದು ಅಂತಹದೇ ಶಿಲೆಯ ಚೂರುಗಳನ್ನು ಆಕರ್ಷಿಸುವ ಗುಣ ಪಡೆದಿದೆ. ಇದನ್ನು ತೂಗಿಬಿಟ್ಟಾಗ ಇದು ಉತ್ತರದಕ್ಷಿಣಾಭಿಮುಖವಾಗಿ ನಿಲ್ಲುತ್ತದೆ. ಈ ರೀತಿಯ ವಿಶೇಷ ಗುಣಗಳು ಸ್ವರ್ಗ ಮತ್ತು ಧ್ರುವ ಪ್ರದೇಶಗಳ ಬಗೆಗೂ ವಿಶೇಷವಾಗಿ ಅಯಸ್ಕಾಂತ ಪರ್ವತಗಳ ಬಗೆಗೂ ಇದ್ದ ಹಲವು ದಂತ ಕಥೆಗಳಿಗೆ ಕಾರಣವಾದವು. ಸುಮಾರು ಹದಿನೇಳನೆಯ ಶತಮಾನದ ತನಕವೂ ಇವು ಜನಸಾಮಾನ್ಯರಲ್ಲಿ ಪ್ರಚಲಿತವಾಗಿಯೇ ಇದ್ದುವು.

	ಕಾಂತದಲ್ಲಿ ಆಕರ್ಷಣಗುಣವಿದೆ. ಆದರೆ ಈ ಗುಣವಿರದ ಕಬ್ಬಿಣ ವಸ್ತುಗಳನ್ನು ನೈಸರ್ಗಿಕ ಕಾಂತಕ್ಷೇತ್ರದಲ್ಲಿರಿಸಿದಾಗ ಅವು ತಮಗೇ ತಾವೇ ಕಾಂತತ್ವವನ್ನು ಪಡೆದುಕೊಳ್ಳುತ್ತಿದ್ದವು. ಇಷ್ಟೇ ಅಲ್ಲ ಇನ್ನೂ ಅನೇಕ ಸಂದರ್ಭಗಳಲ್ಲಿ ಮೂಲಕ್ಷೇತ್ರದಿಂದ ಅವನ್ನು ಬೇರ್ಪಡಿಸಿದ ತರುವಾಯ ಕೂಡ ಅವು ಕಾಂತದೋಪಾದಿಯಲ್ಲಿಯೇ ವರ್ತಿಸುತ್ತಿದ್ದವು. ಈ ಗುಣವೇ ಶೇಷಕಾಂತತ್ವ. ಭೂಮಿಯಲ್ಲಿ ತಿರುಳಿನ ಸಮೀಪ ಪ್ರವಹಿಸುವ ವಿದ್ಯುತ್ ಪ್ರವಾಹಗಳಿಂದ ಅದರ ಮುಖ್ಯ ಕಾಂತಕ್ಷೇತ್ರ ಉತ್ಪತ್ತಿ ಆಗುವುದೆಂದೂ ತೊಗಟೆ ಈ ಪ್ರವಾಹಗಳಿಂದ ಮುಕ್ತವಾಗಿದೆಯೆಂದೂ ನಂಬಲಾಗಿದೆ.

	ಭೂಮಿಯ ಪ್ರಾಕ್ಕಾಂತತ್ವ ಕ್ಷೇತ್ರ : ಕಾಂತದ್ವಿಧ್ರುವಗಳ ಚಲನೆಯಿಂದ ಇಡೀ ಭೂಕಾಂತತ್ವದ ಬಲ ಮತ್ತು ದಿಕ್ಕು ಹೇಳಬಹುದು. ಸುಮಾರು 150 ವರ್ಷಗಳ ಹಿಂದೆ ಭೂಮಿಯ ದ್ವಿಧ್ರುವಗಳ ಚಲನೆ ಇಂದಿಗಿಂತಲೂ 6%ರಷ್ಟು ಹೆಚ್ಚಾಗಿದ್ದರೆ ಸುಮಾರು 1,500ವರ್ಷಗಳ ಹಿಂದೆ 50% ಕ್ಕೂ ಹೆಚ್ಚಾಗಿತ್ತು. ಆದರೆ ಸುಮಾರು 5,500 ವರ್ಷಗಳ ಹಿಂದೆ ಅದು ಇಂದಿನ ಚಲನೆಯ ಅರ್ಧದಷ್ಟಿತ್ತು. ಸುಮಾರು 50ಕೋಟಿ ವರ್ಷಗಳಷ್ಟು ಪುರಾತನವಾದ ಶಿಲಾಮಾದರಿಗಳನ್ನು ಪರೀಕ್ಷಿಸಿದಾಗ ಅವುಗಳ ಅಂದಿನ ಕ್ಷೇತ್ರ ಇಂದಿನದರ ಕಾಲಂಶದಷ್ಟು ಕಡಿಮೆ ಇದ್ದುದು ಕಂಡು ಬಂದಿತು.

	ಭೂಕಾಂತಧ್ರುವೀಯತೆಯ ವಿಪರ್ಯಯತೆಗಳು(ರಿವರ್ಸಲ್): ಪ್ರಾಚೀನ ದಿನಗಳಂದು ಭೂಕಾಂತ ಕ್ಷೇತ್ರದ ದಿಕ್ಕು ಹೇಗೆ ವಿಪರ್ಯಯಗೊಂಡಿತು. ಅಂದರೆ ಬದಲಾಯಿತು ಎಂಬುದನ್ನು ಅರಿಯುವ ದಿಶೆಯಲ್ಲಿ ಸಾಕಷ್ಟು ಮುನ್ನಡೆ ಸಾಧಿಸಲಾಗಿದೆ. ಭೂ ಇತಿಹಾಸದ ಆರಂಭದಲ್ಲೇ ಅಂದರೆ ಬಹುಶಃ 10,000 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಧ್ರುವೀಯತೆ ಸಂಪೂರ್ಣವಾಗಿ ವಿಪರ್ಯಯಗೊಂಡಿತು. ಆಗಲೇ ಕ್ಷೇತ್ರದ ತ್ರಾಣ ಅತ್ಯಂತ ನಿಮ್ನ ಮಟ್ಟಕ್ಕೆ ಕುಸಿದಿರಬಹುದು. ಆದರೆ ಅನಂತರ ಅದೇ ತ್ರಾಣ ವಿರುದ್ದ ದಿಕ್ಕಿನಲ್ಲಿ ಸಮತ್ರಾಣದಿಂದ ಪುನ್ಸಸ್ಥಾಪಿತವಾಗಿರಬಹುದು. ನೈಸರ್ಗಿಕವಾಗಿ ಕ್ರಮಾನುಗತಿಯಲ್ಲಿ ರಚನೆಯಾದ ಶಿಲಾಶ್ರೇಣಿಗಳ ಮಾದರಿಯ ಲಾವಾಹರವುಗಳು ಮತ್ತು ಜಲಜ ಶಿಲಾಪದರಗಳು ಇಂದಿನ ಭೂಕಾಂತಕ್ಷೇತ್ರದಿಕ್ಕಿಗೆ ವಿರುದ್ಧವಾಗಿರುವ ಛೇದಗಳನ್ನು (ಸೆಕ್ಷನ್ಸ್) ಸೂಚಿಸುತ್ತವೆ. ಒಂದು ಶಿಲೆ ಹೇಗಾದರೂ ತನ್ನಷ್ಟಕ್ಕೆ ತಾನೇ ಅದರ ಕಾಂತತ್ವವನ್ನು ವಿರುದ್ದ ದಿಕ್ಕಿಗೆ ತಿರುಗಿಸುವುದೆಂಬ ನಂಬಿಕೆಯಿತ್ತು. ಆದಕಾರಣ ಶಿಲೆಗಳಲ್ಲಿ ಅಂಥ ಒಂದು ಅಸ್ಥಿರ ಗುಣವನ್ನು ಅಭ್ಯಸಿಸುವಲ್ಲಿ ಹೆಚ್ಚು ಅರ್ಥವಿಲ್ಲವೆಂಬ ಅಭಿಪ್ರಾಯಕ್ಕೆ ಬರಲಾಯಿತು.

	ವಿಶಿಷ್ಟ ರೀತಿಯ ಇಲ್ಮನೈಟ್ ಮ್ಯಾಗ್ನಟೈಟ್ ಮಿಶ್ರಣವೊಂದು ಅನ್ವಿತ ಕ್ಷೇತ್ರದ ವಿರುದ್ಧ ದಿಕ್ಕಿನಲ್ಲಿ ಕಾಂತದಂತೆ ಆಕರ್ಷಿಸುವುದೆಂಬ ಅಂಶ 1960ರಲ್ಲಿ ನಿಸ್ಸಂದಿಗ್ಧವಾಗಿ ತಿಳಿದು ಬಂದಿತು. ಆದರೆ ನಿಸರ್ಗದಲ್ಲಿ ಇಂಥ ಮಿಶ್ರಣಗಳು ದೊರೆಯುವುದು ಅಪರೂಪ. ಇತ್ತೀಚೆಗೆ ಭೂಮಿಯ ನಾನಾ ಭಾಗಗಳಿಂದ ಜ್ವಾಲಾಮುಖಿ ಶಿಲೆಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಲಾಯಿತು. ಇದರಿಂದ ಭೂಮಿಯ ಮುಖ್ಯಕಾಂತಕ್ಷೇತ್ರದ ಧ್ರುವೀಯತೆಯ ವಿಪರ್ಯಯತೆ ಬಗ್ಗೆ ನಂಬಲರ್ಹವಾದ ಸಾಕ್ಷ್ಯಗಳು ದೊರಕಿವೆ. ಭೂಮಿಯಲ್ಲಿ ಲಾವಾಹರವುಗಳಿರುವ ಪ್ರದೇಶಗಳಾದ ಐಸ್‍ಲೆಂಡ್, ಹವಾಯ್, ಕ್ಯಾಲಿಫೋರ್ನಿಯ, ದಕ್ಷಿಣ ಯೂರೋಪ್, ಪೂರ್ವ ಆಫ್ರಿಕ, ಅಸ್ಟ್ರೇಲಿಯ ಮತ್ತು ಭಾರತ ಮೊದಲಾದ ಕಡೆಗಳಲ್ಲಿ ವ್ಯಾಪಕವಾಗಿ ಹೊರಚಾಚಿರುವ ಪ್ಲಿಯೊಸೀನ್ ಮತ್ತು ಪ್ಲೀಸ್ಟೊಸೀನ್ ಕಾಲಗಳ ದಪ್ಪ ಬಸಾಲ್ಟಿಕ್ ಲಾವಾಹರವುಗಳು ಈ ದಿಸೆಯಲ್ಲಿ ತುಂಬ ಉಪಯುಕ್ತವೆನಿಸಿವೆ. ಹೊರಚಾಚಿರುವ ಈ ಶಿಲೆಗಳಿಂದ ಹೆಚ್ಚು ಸ್ಥಿರವಾದ ಶೇಷಕಾಂತತ್ವವಿರುವ ಶಿಲಾ ಮಾದರಿಗಳನ್ನು ಸಂಗ್ರಹಿಸಿ ಕ್ರಮಾನುಗತಿಯಲ್ಲಿರುವ ಈ ಶಿಲಾಹರವುಗಳಲ್ಲಿ ಶಿಲೆಗಳ ಸಾಪೇಕ್ಷಪ್ರಾಯಗಳನ್ನು ಸ್ಟಷ್ಟವಾಗಿ ತಿಳಿಯಬಹುದು. 

ಪ್ರಾಕ್ಕಾಂತತ್ವದ ವಾಸ್ತವಾಂಶಗಳು : ಇಂಗ್ಲೆಂಡ್ ಮತ್ತು ಜಪಾನ್ ದೇಶಗಳಲ್ಲಿ ಸಂಶೋಧನೆಗಳನ್ನು ನಡೆಸಿ ಶಿಲೆಗಳ ಶೇಷಕಾಂತತ್ವವನ್ನು ಅಳೆಯಲಾಯಿತು. ಇದರಿಂದ ಖಂಡಗಳ ಅಲೆತ ವಾದವನ್ನು ಪುನರುಜ್ಜೀವನಗೊಳಿಸಿ ಅದನ್ನು ಪುನಃ ಪರೀಕ್ಷಣೆಗೆ ಒಳಪಡಿಸುವ ಪ್ರಥಮ ಸೂಚನೆಗಳು 1950ರ ಸುಮಾರಿಗೆ ಕಂಡುಬಂದುವು. ಖಂಡಗಳ ಅಲೆತ ಮತ್ತು ಫಲಕ ಸಿದ್ದಾಂತಗಳ (ಪ್ಲೇಟ್ ಟೆಕ್‍ಟ್ಯಾನಿಕ್ಸ್) ಬಗೆಗೆ ಪ್ರಾಕ್ಕಾಂತತ್ವದ ಅಧ್ಯಯನ ಈ ಮೂರು ಅತ್ಯಂತ ಮಹತ್ತ್ವ ಪೂರ್ಣಸಾಕ್ಷ್ಯಗಳನ್ನು ಒದಗಿಸಿವೆ; ಧ್ರುವಗಳ ಅಲೆತ, ಖಂಡಗಳ ಸ್ಥಾನಪಲ್ಲಟ ಮತ್ತು ಆವರ್ತನೆ, ಭೂಕಾಂತಕ್ಷೇತ್ರದ ವಿಪರ್ಯಯತೆ, ಕಾಲದಿಂದ ಶಿಥಿಲಗೊಳ್ಳದ ಶಿಲೆಗಳ ಮಾದರಿಗಳನ್ನು ಎಲ್ಲ ಖಂಡಗಳಿಂದಲೂ ಸಂಗ್ರಹಿಸಿ, ಅವುಗಳಲ್ಲಿಯ ಫಾಸಿಲ್ ಕಾಂತತ್ವವನ್ನು ಅಳೆಯಲಾಯಿತು. ಸುಮಾರು 2 ಕೋಟಿ ವರ್ಷಗಳಿಂದಲೂ ಭೂಕಾಂತ ಧ್ರುವಗಳ ಸ್ಥಾನಗಳು ಬದಲಾಗದೇ ಇರುವುದು ಈ ಅಧ್ಯಯನದಿಂದ ಕಂಡುಬಂದಿತು.

	ಧ್ರುವಗಳ ಅಲೆತ : ಇಂಗ್ಲೆಂಡಿನ ನ್ಯೂ ಕ್ಯಾಸೆಲ್-ಅನ್-ಟೈಮ್ ಎಂಬಲ್ಲಿ ಎಸ್. ಕೆ. ರಂಕಾರ್ನ್ ಮತ್ತು ಅವರ ಸಹೋದ್ಯೋಗಿಗಳು ಸಂಗ್ರಹಿಸಿದ ಮಾಹಿತಿಗಳಿಂದ ಉತ್ತರಕಾಂತಧ್ರುವದ ಸ್ಥಾನ ಕನಿಷ್ಠ ಸುಮಾರು 21,000 ಕಿಮೀಗಳಷ್ಟು ದೀರ್ಘಪಥದಲ್ಲಿ ಪೂರ್ವ ಕೇಂಬ್ರಿಯನ್ ಕಾಲದ ಕೊನೆಯಲ್ಲಿ ಉತ್ತರ ಅಮೆರಿಕದ ಪಶ್ಚಿಮದಿಂದ ಚಲಿಸಿಲಾರಂಭಿಸಿ ಮಧ್ಯಜೀವಿಕಲ್ಪದಲ್ಲಿ ಇಂದಿನ ಪೆಸಿಫಿಕ್ ಸಾಗರದ ಮೂಲಕ ಏಷ್ಯದ ಉತ್ತರಕ್ಕೂ ಟರ್ಷಿಯರಿ ಯುಗದ ಮಧ್ಯದಲ್ಲಿ ಉತ್ತರ ಧ್ರುವ ಪ್ರದೇಶಕ್ಕೂ ತಲಪಿತೆಂದು ಕಂಡುಬರುತ್ತದೆ. ಒಂದು ವೇಳೆ ಎಲ್ಲ ಖಂಡಗಳಿಂದಲೂ ಸಮಾನ ವಯಸ್ಸಿನ ಶಿಲೆಗಳ ಸಂಚಾರ ಸರ್ವತ್ರ ಅದೇ ಸಂಚಾರೀ ಧ್ರುವದ ಕಡೆಗೇ ಇದ್ದ ಪಕ್ಷದಲ್ಲಿ ಅಂಥ ಒಂದು ಘಟನೆ ಧ್ರುವ ಸಂಚಾರದಿಂದಾಯಿತೆಂದು ತಿಳಿಯಬಹುದು. ಭೂತೊಗಟೆಯನ್ನೂ ಭಾಗಶಃ ಅದರ ಕವಚವನ್ನೂ ಒಳಗೊಂಡ ಹೊರಚಿಪ್ಪು ಬೇರ್ಪಟ್ಟು ಏಕವಾಗಿ ಭೂಮಿಯ ಅಂತರ್ಯದ ಮೇಲೆ ಚಲಿಸಿರುವುದೆಂಬ ಭಾವನೆ ಕೂಡ ಇದರಿಂದ ಅನುಗತವಾಗುತ್ತದೆ. ಶಿಲಾಕಾಂತತ್ವದಿಂದ ದೊರೆತ ವಾಸ್ತವಿಕ ಸಾಕ್ಷ್ಯಾಧಾರಗಳಾದರೂ ಈ ಸಮಸ್ಯೆಗೆ ಸುಲಭ ಪರಿಹಾರ ಒದಗಿಸಲಾರವು. ಸುಮಾರು 2 ಕೋಟಿ ವರ್ಷಗಳಿಗೂ ಪುರಾತನವಾದ ವಿವಿಧ ಖಂಡಗಳಿಂದ ಸಂಗ್ರಹಿಸಲಾದ ಶಿಲೆಗಳು ಧ್ರುವಗಳ ಹಿಂದಿನ ಸ್ಥಾನಗಳನ್ನು ಸೂಚಿಸುತ್ತವೆ. ಮತ್ತು ಧ್ರುವಗಳ ದಿಕ್ಚ್ಯುತಿಯನ್ನೂ ಅವು ಚಲಿಸಿದ ಪಥವನ್ನೂ ಕ್ರಮಬದ್ಧವಾಗಿ ನಿರೂಪಿಸುತ್ತವೆ. ಒಂದು ಕಾಲಕ್ಕೆ ಒಂದುಗೂಡಿಯೇ ಇದ್ದ ಭೂಖಂಡಗಳು ಕ್ರಮೇಣ ಪ್ರತ್ಯೇಕಗೊಂಡು ಸಾಪೇಕ್ಷವಾಗಿ ಚಲಿಸಿದವು ಎಂಬ ಅಂಶ ಇದರಿಂದ ವ್ಯಕ್ತವಾಗುತ್ತದೆ. ಇಂಥ ಭೂಭಾಗಗಳಲ್ಲಿ ಧ್ರುವಗಳ ಸಂಚಾರ ವಕ್ರರೇಖೆಗಳನ್ನು ಆಧರಿಸಿ ಈ ಭೂಭಾಗಗಳ ಹಿಂದಿನ ಸ್ಥಾನಗಳನ್ನು ಪುನಾರಚಿಸಬಹುದು. ಪ್ರಾಕ್ಕಾಂತತ್ವದ ಆಧಾರದ ಮೇಲೆ ಭೂಖಂಡಗಳ ಪುನಾರಚನೆಮಾಡಿ ವಿವಿಧ ಖಂಡಗಳ ತುಂಡುಗಳನ್ನು ಪೊರ್ದಿಸಿ ಪ್ರಾಚೀನ ಹವಾಗುಣಗಳ ಮಾದರಿಗಳನ್ನು ನಮೂದಿಸಲು ಅಗತ್ಯವಾದ ಮಾಹಿತಿ ಪಡೆಯಬಹುದೆಂಬ ಅಂಶ ಪರೀಕ್ಷೆಗಳಿಂದ ತಿಳಿದು ಬಂದಿದೆ.

	ಬ್ಲಾಕೆಟ್ ಮತ್ತು ಅವರ ಸಹೊದ್ಯೋಗಿಗಳು ಭೂಮ್ಯಾದ್ಯಂತ ಪ್ರಾಕ್ಕಾಂತತ್ವದ ಮಾಪನಗಳಿಂದ ಸಂಗ್ರಹಿಸಲಾಗಿರುವ ವಾಸ್ತವಾಂಶಗಳ ಆಧಾರದ ಮೇಲೆ ಮೇಲಿನ ಚಿಂತನೆಗಳಿಗೆ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಪ್ರಾಚೀನ ಜೀವಕಲ್ಪದ ಪ್ರಾರಂಭದಿಂದಲೂ ಎಲ್ಲ ಖಂಡಗಳೂ ಉತ್ತರದ ಕಡೆಗೆ ಚಲಿಸಿದುವು ಮತ್ತು ಅವುಗಳ ಪೈಕಿ ಹೆಚ್ಚಿನವು ಸ್ವಲ್ಪ ಪ್ರದಕ್ಷಿಣವಾಗಿ ಅಥವಾ ಅಪ್ರದಕ್ಷಿಣವಾಗಿ ಆವರ್ತಿಸಿದುವು. ಪ್ರಾಕ್ಕಾಂತತಾಮಾಪನಗಳು ಶಿಲಾಮಾದರಿಗಳ ರೇಖಾಂಶದ ಸ್ಥಾನಗಳ ಬಗೆಗೆ ಯಾವುವೇ ಸಾಕ್ಷ್ಯಗಳನ್ನೂ ಒದಗಿಸುವುದಿಲ್ಲ. ಆದ್ದರಿಂದ ಖಂಡಗಳ ಪೂರ್ವಾಭಿಮುಖ ಅಥವಾ ಪಶ್ಚಿಮಾಭಿಮುಖ ಚಲನೆಯನ್ನು (ಒಂದು ವೇಳೆ ಗುರುತಿಸುವುದಾದಲ್ಲಿ) ಶೋಧಿಸುವ ಯತ್ನದಲ್ಲಿ ಅಂಥ ಶಿಲಾ ಮಾದರಿಗಳು ಉಪಯುಕ್ತವಾಗಲಾರವು. ಭಾರತದಿಂದ ಸಂಗ್ರಹಿಸಲಾದ ಪ್ರಾಕ್ಕಾಂತತ್ವದ ವಾಸ್ತವಾಂಶಗಳು ವಿಶೇಷ ಆಸಕ್ತಿಯನ್ನು ಕೆರಳಿಸಿವೆ. ಏಕೆಂದರೆ ಸುಮಾರು 15 ಕೋಟಿ ವರ್ಷಗಳ ಹಿಂದೆ ಭಾರತ ದಕ್ಷಿಣ ಧ್ರುವದಲ್ಲಿತ್ತು. ಮತ್ತು ಅಲ್ಲಿಂದ ಅದು ಕ್ರಮೇಣ ಚಲಿಸುತ್ತ ಸಮಭಾಜಕವೃತ್ತವನ್ನು ದಾಟಿ ಉತ್ತರಾಭಿಮುಖವಾಗಿ ಚಲಿಸಲಾರಂಭಿಸಿತು ಎಂಬ ವಿಷಯ ಈ ಮೇಲಿನ ವಾಸ್ತವಾಂಶಗಳಿಂದ ತಿಳಿದು ಬಂದಿದೆ. ಅವು ನೀಡಿರುವ ವಿವರಗಳು ಸ್ತರಶಾಸ್ತ್ರ(ಸ್ಟ್ಯಾಟಿಗ್ರಫಿ) ಮತ್ತು ಪ್ರಾಗ್ಜೀವ ಶಾಸ್ತ್ರದ ಸಾಕ್ಷ್ಯಾಧಾರಗಳ ಜೊತೆ ಹೊಂದಿಕೆಯಾಗುತ್ತವೆ. ಇದರಿಂದ ಹಿಂದೆ ಭಾರತ ಗೊಂಡ್ವಾನಾ ಎಂಬ ಬೃಹತ್ ಭೂಭಾಗದ ಒಂದು ಅಂಗವಾಗಿದ್ದಿತು ಎಂಬ ಅಂಶ ವ್ಯಕ್ತವಾಗುತ್ತದೆ. ಆದರೆ ಪ್ರಾಕ್ಕಾಂತತ್ವದ ಆಧಾರದ ಮೇಲೆ ಮಂಡಿಸಲಾದ ಭೂವೈಜ್ಞಾನಿಕ ಅಭಿಪ್ರಾಯಗಳ ಬಗೆಗೆ ಕೆಲವು ವಿಜ್ಞಾನಿಗಳು ಸಂದೇಹ ತಳೆದಿದ್ದಾರೆ. ಇವರ ಪ್ರಕಾರ ಈಗ ಲಭ್ಯವಾಗಿರುವ ಪುರಾವೆಗಳು ಸಾಲವು. ಶಿಲಾಮಾದರಿಗಳ ವಿಶ್ಲೇಷಣೆ ಅಪರಿಪೂರ್ಣ, ದ್ವಿಧ್ರುವ ಕಾಂತಕ್ಷೇತ್ರದ ಬಗೆಗೆ ಇರುವ ಮಾಹಿತಿ ಅಪೂರ್ಣ ಎಂದು ಮುಂತಾಗಿ ಇದೆ.	
 											   (ಎಂ. ಎಸ್. ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ